Tags » Baraha

Limang Pala

Isang tula tungkol sa mga baraha —

Poetry

ಜೀವನಗಾಥೆ

ಹುಟ್ಟೂರಿನ ಕಿರು ಚಿತ್ರಣ…….

ನನ್ನ ಹುಟ್ಟೂರಾದ ಗೋಕರ್ಣ ಒಂದು ಪವಿತ್ರ ಕ್ಷೇತ್ರ. ಇಲ್ಲಿ ದಿನ ನಿತ್ಯ ಸಾವಿರಾರು ಭಕ್ತರು ಬಂದು ಆ ಮಹಾಬಲೇಶ್ವರನ ಅನುಗ್ರಹ ಪಡೆದು ಧನ್ಯರಾಗುತ್ತಾರೆ. ಈ ಊರಲ್ಲಿ ಅವೆಷ್ಟು ದೇವಸ್ಥಾನಗಳಿವೆಯೋ, ಲೆಕ್ಕ ಹಾಕುವುದು ಕಷ್ಟ ಸಾಧ್ಯ. ಆದರೂ ಮಹಾಗಣಪತಿ, ಮಹಾಬಲೇಶ್ವರ ಹಾಗೂ ಪಾರ್ವತೀ ದೇವಸ್ಥಾನಗಳು ಮುಖ್ಯವಾದುದು. ಈ ಊರಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರವೇ ಇಲ್ಲ. ಈ ಊರಲ್ಲಿ ಒಂದು ಶಕ್ತಿ ಇದೆ. ಸೆಲೆ ಇದೆ.

ಇತ್ತೀಚಿನ ದಿನಗಳಲ್ಲಿ ಗೋಕರ್ಣ ಎಂಬುದು ಮುಖ್ಯ ಪ್ರವಾಸೀ ತಾಣವಾಗಿದೆ. ದಿನನಿತ್ಯ ಸಾವಿರಾರು ಮಂದಿ ತುಂಬಾ ದೂರದ ಊರುಗಳಿಂದ ಬರುತ್ತಾರೆ. ಆದರೆ ಒಂದು ಸಂಗತಿ ನಾನಿಲ್ಲಿ ಹೇಳಲೇಬೇಕು. ಪ್ರವಾಸೋದ್ಯಮ ಎಂಬುದು ಇಲ್ಲಿ ಓಂ ಬೀಚ್, ಕುಡ್ಲೆ ಬೀಚ್ ಮತ್ತಿತರ ಬೀಚ್ ಗಳಿಗಷ್ಟೇ ಸೀಮಿತವಾಗಿದೆ ಎಂಬುದು ದುರಾದ್ರಷ್ಟಕರ.ಇಂತಹ ಒಂದು ಪವಿತ್ರ ಕ್ಷೇತ್ರದಲ್ಲಿ ದೇವನಿದ್ದನೆಂಬುದೇ ಜನಗಳಿಗೆ ತಲುಪಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಈ ನೆಲೆಯ ಧರ್ಮ, ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ.

ಈ ಊರಿಗೆ ಬರುವವರಲ್ಲಿ ಹೆಚ್ಚಿನವರು ವಿದೇಶಿಗರು. ಆ ಕಾರಣದಿಂದಲೋ ಅಥವಾ ಅವರ ಪಾಶ್ಚ್ಯಾತ್ಯ ಸಂಸ್ಕೃತಿಗೆ ಮಾರುಹೋಗಿರುವ ನಮ್ಮಂಥ ಜನಗಳಿಂದಲೋ ಈ ತಾಣ ತನ್ನ ಮೂಲ ಧಾರ್ಮಿಕ ಪರಂಪರೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದು ಮಾತ್ರ ವಿಷಾದಕರ. ವ್ಯಾವಹಾರಿಕವಾಗಿ ನನ್ನೂರು ತುಂಬಾ ಬೆಳೆದಿದೆ. ಆದರೆ ಕಾರಣ ಮಾತ್ರ ಬೇರೆಯದೇ. ಈಗಲಾದರೂ ನಾವೆಲ್ಲ ಒಟ್ಟಾಗಿ ಈ ಪವಿತ್ರ ಸ್ಥಳದ ಮಹಿಮೆಯನ್ನು ಮತ್ತು ಇಲ್ಲಿನ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಳ್ಳುವಲ್ಲಿ ಜಾಗೃತರಾಗಲೇಬೇಕು. ಎಲ್ಲರೂ ಮಹಾಬಲೇಶ್ವರನ ಅನುಗ್ರಹವನ್ನು ಪಡೆಯೋಣ.

ಧರ್ಮೋ ರಕ್ಷತಿ ರಕ್ಷಿತಃ ||

ತೃಣಮಪಿ ನ ಚಲತಿ | ಬಲೀಯಸೀ ಕೇವಲಮೀಶ್ವರೇಚ್ಛಾ ||
ಹರ ಹರ ಮಹಾದೇವ‌

ಬಾಲ್ಯದ ಸವಿನೆನಪಿನ ಬುತ್ತಿಗೆ……

ಬಾಲ್ಯ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ತುಂಬಾ ದಿನ ಮರೆಯಲಾಗದೆ ಉಳಿಯುವ ಒಂದು ವಿಶಿಷ್ಟ ಸವಿನೆನಪಿನ ಘಳಿಗೆ. ಇಂದೂ ಕೂಡ ನಾವೆಲ್ಲ ಎಷ್ಟೋ ಬಾರಿ ಅಂದುಕೊಳ್ಳುತ್ತಿರುತ್ತೇವೆ “ಅಯ್ಯೋ ನಾನು ಯಾಕಾದ್ರೂ ದೊಡ್ಡವನಾದೆನಪ್ಪಾ, ನನ್ನ ಬಾಲ್ಯದ ದಿನಗಳೇ ಎಷ್ಟೊಂದು ಸುಂದರವಾಗಿತ್ತು, ಮತ್ತೆ ವಾಪಸ್ ಅದೇ ಕಾಲಘಟ್ಟಕ್ಕೆ ತಿರುಗಿ ಹೋಗಬಾರದೇ” ಎಂದು. ಅದೇನು ನಮ್ಮ ಮನೆಯ ಕೆಟ್ಟು ಹೋದ ಗಡಿಯಾರದ ಮುಳ್ಳನ್ನು ತಿರುಗಿಸಿದ ಹಾಗೆಯೇ? ವಾಪಸ್ ಹೋಗಲಿಕ್ಕೆ. ಇದು ಜೀವನ ಚಕ್ರ. ಒಮ್ಮೆ ಕಳೆದ ಆ ರಸಘಳಿಗೆಗಳು ಮತ್ತೆ ಬಾರದು. ಅದನ್ನು ಆಗಾಗ ನೆನೆಸಿಕೊಂಡು ಸವಿಯಬಹುದಷ್ಟೆ. ಆ ದಿನಗಳೇ ಹಾಗೆ, ತುಂಬಾ ಸುಂದರ, ಜೀವನದ ಅದ್ಭುತ ಭಾಗ. ನೆನೆಸಿಕೊಂಡರೆ ನಮ್ಮ ತುಂಟಾಟಗಳು, ಗಲಾಟೆ, ಕಿರುಚಾಟ ಎಲ್ಲ ಕಣ್ಮುಂದೆ ತೆರೆದುಕೊಳ್ಳುತ್ತವೆ. ಈಗ ನಾನು ಹೇಳ ಹೊರಟಿರುವುದು ಇದನ್ನೇ. ನನ್ನದ ಬಾಲ್ಯದ ಸವಿನೆನಪಿನ ಬುತ್ತಿಗೆಯನ್ನು.

ನಾನು ಹುಟ್ಟಿದ್ದು ಆಗಸ್ಟ್ 1,1986 ರಂದು. ಅಂದು ಆಷಾಢ ಏಕಾದಶಿ, ಶುಕ್ರವಾರ ಬೆಳಿಗ್ಗೆ 6 ಗಂಟೆಗೆ  ನನ್ನ ಜನನ. ನಾನು ಹುಟ್ಟಿದ್ದು ಮನೆಯಲ್ಲೇ. ಬ್ರಾಹ್ಮಣ ಸಂಪ್ರದಾಯದಂತೆ, ನಾನು ಹುಟ್ಟಿದ 11 ನೇ ದಿವಸದಲ್ಲಿ, ತಂದೆ ನನ್ನ ಕಿವಿಯಲ್ಲಿ ‘ಮಂಜುನಾಥ’ ಎಂದು ಮೂರು ಬಾರಿ ಕೂಗಿ ನನಗೆ ನಾಮಕರಣ ಮಾಡಿದರು. ನನ್ನ ತಂದೆ,ತಾಯಿ ಧರ್ಮಸ್ಥಳಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದ ಮೇಲೆ ನಾನು ಹುಟ್ಟಿದ್ದರಿಂದ ಆ ಹೆಸರು ನನ್ನದಾಯಿತು. ನನಗೆ ನನ್ನ ಅಜ್ಜನ ಹೆಸರು ಕೂಡ ಇಟ್ಟಿದ್ದಾರೆ. ವಿಶ್ವನಾಥ ಅಂತ. ಆದರೆ ನಾನು ಮಂಜುನಾಥ ಎಂದೇ ಎಲ್ಲರಿಗೂ ಪರಿಚಿತ. ನನ್ನ ತಂದೆ ಗಣೇಶ ಹಾಗೂ ತಾಯಿ ಲಲಿತಾ. ನನ್ನ ಅಕ್ಕ ದೀಪ. ನನಗೂ ಹಾಗೂ ನನ್ನ ಅಕ್ಕಳಿಗೆ 2 ವರ್ಷಗಳ ಅಂತರವಿದೆ. ಅವಳು ಹುಟ್ಟಿದ್ದೂ ಕೂಡ ಆಗಸ್ಟ್ ನಲ್ಲೇ. ಅವಳದ್ದು ಆಗಸ್ಟ್ 16  ನೇ ತಾರೀಕು. ಒಮ್ಮೊಮ್ಮೆ ನಾನು ನನ್ನ ತಾಯಿಯಲ್ಲಿ ಪ್ರಶ್ನೆ ಮಾಡಿದ್ದುಂಟು. ಅವಳು ನನಗೆ ಅಕ್ಕನಾ? ಅಥವಾ ತಂಗಿಯಾ? ಎಂದು!. ಯಾಕೆಂದರೆ ಅವಳು ಹುಟ್ಟಿದ ದಿನಾಂಕ ಆಗಸ್ಟ್ 16, ನಾನು ಹುಟ್ಟಿದ್ದೂ ಆಗಸ್ಟ್ 1. ಹಾಗಾಗಿ ನಾನೇ ಹಿರಿಯ ಎನ್ನುವುದು ನನ್ನ ವಾದವಾಗಿತ್ತು.

ನಾನು ಚಿಕ್ಕವನಿರುವಾಗ ಬೆಳ್ಳಗೆ, ದುಂಡು ಮೈಕಟ್ಟು ಹೊಂದಿದವನಾಗಿದ್ದೆನಂತೆ. ನನಗೆ ಹುಡುಗಿಯರ ಹಾಗೆ ತುಂಬಾ ಉದ್ದನೆಯ ಜಡೆ ಇತ್ತಂತೆ. ದಿನಾಲೂ ನನಗೆ ನನ್ನ ಅಕ್ಕನಂತೆ ಜಡೆ ಹಾಕುತ್ತಿದ್ದಳಂತೆ ನನ್ನ ಆಯಿ (ತಾಯಿ). ನನಗೆ ಜಾಸ್ತಿ ಕೂದಲು ಹಾಗಾಗಿ ನಿಂಗೆ ಧೈರ್ಯ ಜಾಸ್ತಿ ಅಂತ ನಮ್ಮಮ್ಮ ಈಗಲೂ ಹೇಳುತ್ತಾರೆ.

ಸುಮಾರು ನನಗೆ ಒಂದೂವರೆ ವರ್ಷ ತುಂಬಿರಬೇಕು. ಯಾವತ್ತೋ ಒಂದು ದಿನ ನನಗೆ ಮಜ್ಜಿಗೆ ಅನ್ನ ಊಟ ಮಾಡಿಸುತ್ತಿರಬೇಕಾದರೆ ತುಂಬಾ ವಾಂತಿಯಾಗಿ ಉಬ್ಬುಸ ಶುರುವಾಯಿತಂತೆ. ನನಗೆ ಮೊದಲೇ ನೆಗಡಿ ಆಗಿದ್ದು, ಆಯಿಗೆ ತಿಳಿಯದೇ ಹೋದ್ದರಿಂದ ಅಷ್ಟೆಲ್ಲ ಅವಾಂತರವಾಗಿ, ಅಂದಿನಿಂದ ನನ್ನ ಅನಾರೋಗ್ಯ ಮೈಹಿಡಿಯಿತು. (ಹಾಗಾಗಿಯೇ ನಾನು ಇಂದಿಗೂ ಕೂಡ ಮಜ್ಜಿಗೆ ಸೇವನೆ ಮಾಡುವುದಿಲ್ಲ. ನಾನು ಸಾಮಾನ್ಯ ಮಜ್ಜಿಗೆ ವಿರೋಧಿ ಸಂಘದವನು!).

ಅಲ್ಲಿಂದ ಶುರುವಾಗಿ ನನ್ನ ಹತ್ತನೇ ವಯಸ್ಸಿನವರೆಗೂ ನಾನು ಸೂಕ್ಷ್ಮಜೀವಿಯಾಗಿದ್ದೆ. ಯಾವಾಗಲೂ ನೆಗಡಿ, ಜ್ವರ, ಉಬ್ಬುಸ. ನಾನಿವತ್ತು ಈ ರೀತಿ ಇದ್ದೇನೆಂದರೆ ಅದು ನನಗೆ ನನ್ನ ಆಯಿ ಕರುಣಿಸಿದ  ಪುನರ್ಜನ್ಮದ ಭಾಗ್ಯ. ನಂಗೆ ಸುಮಾರು ಎರಡು ವರ್ಷ ತುಂಬಿರಬೇಕು. ಒಂದು ದಿವಸ ಜ್ವರ ವಿಪರೀತಕ್ಕೆ ತಿರುಗಿ, ನಮ್ಮ ಮನೆ ವೈದ್ಯರಾದ ಭೂಷಣ್ ಡಾಕ್ಟರ್ ಸಲಹೆಯಂತೆ ನನ್ನನ್ನು ಕಾರವಾರಕ್ಕೆ ಕರೆದುಕೊಂಡು ಹೋದರಂತೆ. ನನ್ನ ಚೀರಾಟ, ಕೂಗು ಕೇಳಿ ಬಸ್ಸಲ್ಲಿದ್ದವರೆಲ್ಲ ಇವನಿನ್ನು ಬದುಕುವಿದಿಲ್ಲ, ಇಲ್ಲೇ ಎಲ್ಲಾದರೂ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡಿ ಹೋಗಿ ಎಂದು ನನ್ನ ಆಯಿಯಲ್ಲಿ ಹೇಳಿದರಂತೆ. ನನ್ನ ಆ ದಿನದ ಚೀರಾಟದ ಕೂಗು ನನ್ನ ಆಯಿಯ ಕಿವಿಯಲ್ಲಿ ಇವತ್ತಿಗೂ ಕೂಡ ಹಾಗೆ ಉಳಿದಿದೆ. ಅವಳು ನನಗೆ ಈ ವಿಷಯವನ್ನು ಹೇಳುವಾಗಲೆಲ್ಲ, ನನ್ನ ಆಯಿಯ ಮನಸ್ಥಿತಿ ಅಂದು ಹೇಗಿತ್ತು, ನೆನೆಸಿಕೊಂಡರೆ ಮೈಯೆಲ್ಲಾ ಸಂಕಟವಾಗುತ್ತದೆ. ಅಂತೂ ಇಂತೂ ಹೇಗೋ ಕಾರವಾರದ ಆಸ್ಪತ್ರೆಗೆ ಸೇರಿಸಿ ಎರಡು ದಿನ ಉಪವಾಸದಿಂದಿದ್ದು ನನ್ನನ್ನು ಬದುಕಿಸಿಕೊಂಡಳು. ಆ ಕಾಲದಲ್ಲಿ ನಮ್ಮ ಮನೆಯಲ್ಲಂತೂ ತುಂಬಾ ಬಡತನ. ಅದನ್ನೆಲ್ಲ ಸಹಿಸಿಕೊಂಡು, ನನಗೆ ಪುನರ್ಜನ್ಮದ ಭಾಗ್ಯ ಕರುಣಿಸಿದ ಆಯಿ ನಿಜವಾಗಲೂ ನನ್ನ ಆರಾಧ್ಯ ದೈವ.

ಈಗಿನ ಹಾಗೆ ಎಲ್ ಕೆ ಜಿ, ಯು ಕೆ ಜಿ ಗಳಾಗಲಿ ನಮ್ಮ ಕಾಲದಲ್ಲಿ ಇರಲಿಲ್ಲ. ಆಗೆಲ್ಲ ಅಂಗನವಾಡಿಗೆ (ಬಾಲವಾಡಿ ಅಂತ ನಾವು ಕರೆಯುವುದು) ಹೋಗುತ್ತಿದ್ದೆವು. ದಿನಾಲೂ ಬೆಳಿಗ್ಗೆ ಕರೆದುಕೊಂಡು ಹೋಗಲಿಕ್ಕೆ ಮನೆ ಬಾಗಿಲಿಗೇ “ಗಣಪಿ” ಎಂಬ ಅಂಗನವಾಡಿಯ ಸಹೋದ್ಯೋಗಿಯೊಬ್ಬಳು ಬರುತ್ತಿದ್ದಳು. ಒಮ್ಮೊಮ್ಮೆ ಬಾಲವಾಡಿಗೆ ಹೋಗಲಿಕ್ಕೆ ಮನಸ್ಸಿಲ್ಲದಿದ್ದಾಗ ಒಂದು ಕಡೆ ಅವಿತುಕೊಂಡು ಕುಳಿತಿರುತ್ತಿದ್ದೆ. ಆದರೆ ಗಣಪಿ ಮನೆಯೊಳಗೇ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು.ಅವಳಿಗೆ ನಾನು ಅಡಗಿ ಕೂತಿಕೊಳ್ಳುತ್ತಿದ್ದ ಜಾಗವೆಲ್ಲ ತಿಳಿದಿರುತ್ತಿತ್ತು. ಅದಕ್ಕೆ ನನ್ನ ಆಯಿಯ ಸಹಾಯವೂ ಇತ್ತು. ಬಾಲವಾಡಿಯಲ್ಲಿ ಬೆಳಿಗ್ಗೆ ಹೋದ ತಕ್ಷಣ ಪ್ರಾರ್ಥನೆ, ನಂತರ ಸಣ್ಣ ಪುಟ್ಟ ಪಾಠಗಳು, ಸ್ವಲ್ಪ ಹೊತ್ತು ಆಟ. ಆದರೆ ನಾನು ತುಂಬಾ ಹೊತ್ತಿನಿಂದ ಕಾಯುತ್ತಿದ್ದ ಘಳಿಗೆ ಮಾತ್ರ ಊಟಕ್ಕೆ. ದಿನಾಲೂ ನಮಗೆ ಪಾಯಸ ಅಥವಾ ಸಿಹಿ ಹಿಟ್ಟಿನ ಉಂಡೆ ಮಾಡಿಕೊಡುತ್ತಿದ್ದರು. ನನಗೆ ಮೊದಲೇ ಸಿಹಿ ಎಂದರೆ ಎಲ್ಲಿಲ್ಲದ ಇಷ್ಟ. ಅದರ ರುಚಿ ನೆನೆಸಿಕೊಂಡರೆ ಇಂದಿಗೂ ಬಾಯಲ್ಲಿ ನೀರೂರುತ್ತದೆ. ಅಷ್ಟೊಂದು ಚೆನ್ನಾಗಿ ಮಾಡಿಕೊಡುತ್ತಿದ್ದಳು ನಮ್ಮ ಗಣಪಿ. ಆ ಸಿಹಿ ಹಿಟ್ಟಿನ ಒಂದು ಪ್ಯಾಕೆಟ್  ಅನ್ನು ಎಲ್ಲ ಮಕ್ಕಳಿಗೂ ವಾರಕ್ಕೊಮ್ಮೆ ಹಂಚುತ್ತಿದ್ದರು. ನಾನು ಒಮ್ಮೊಮ್ಮೆ ಆಯಿಯ ಹತ್ತಿರ ಮನೆಯಲ್ಲಿಯೇ ಮಾಡಿಸಿಕೊಡನು ಆ ಸಿಹಿ ಹಿಟ್ಟಿನ ಉಂಡೆಯನ್ನು ತಿನ್ನುತ್ತಿದ್ದೆ. ಇವತ್ತಿಗೂ ನನಗೆ ಅದರ ಸ್ವಾದ ಮರೆತಿಲ್ಲ.