ನವದೆಹಲಿ: ಕ್ರಾಂತಿಕಾರಿಗಳಾದ ಭಗತ್​ಸಿಂಗ್, ಸುಖದೇವ್ ಹಾಗೂ ರಾಜ್​ಗುರು ಅವರಿಗೆ ಸಂಬಂಧಿಸಿದ ಕುತೂಹಲದ ಮಾಹಿತಿಗಳುಳ್ಳ ಸುಮಾರು 160 ಕಡತಗಳು ಪಾಕಿಸ್ತಾನದ ಲಾಹೋರ್​ನಲ್ಲಿವೆ. ಎಂಟು ದಶಕದಿಂದ ಇವುಗಳ ಮಾಹಿತಿ ಸೋರಿಕೆ ಆಗದಂತೆ ತಡೆಯಲಾಗಿದೆ. ಭಾರತ ಮಧ್ಯಪ್ರವೇಶಿಸಿ ಈ ಕಡತಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಭಗತ್​ಸಿಂಗ್​ ಅವರ ಕುಟುಂಬದ ಆಗ್ರಹಿಸಿದೆ.

ಲಾಹೋರ್ ಸಂಚು ಪ್ರಕರಣ ಸಂಬಂಧದ ಕಡತಗಳನ್ನು, ಅಲ್ಲಿನ ಸಂಗ್ರಹಾಗಾರದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ. ಈವರೆಗೂ ಅನೇಕ ಇತಿಹಾಸಕಾರರು ಈ ಕಡತಗಳನ್ನು ಪಡೆದುಕೊಳ್ಳುವುದಕ್ಕೆ ಹಾಗೂ ಅವುಗಳಲ್ಲಿ ಮಾಹಿತಿ ಪರಿಶೀಲನೆಗೆ ಕೋರಿ, ಮನವಿ ಸಲ್ಲಿಸಿದ್ದರೂ ಲಾಹೋರ್​ ಆಡಳಿತ ನಿರಾಕರಿಸಿದೆ.

ಏನಿದು ಲಾಹೋರ್ ಸಂಚು ಪ್ರಕರಣ?

ಬ್ರಿಟೀಷ್ ಅಧಿಕಾರಿ ಸೈಮನ್ ನೇತೃತ್ವದ ಸಮಿತಿಯನ್ನು ವಿರೋಧಿಸಿ ಭಾರತದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದವು. ಲಾಹೋರ್​ನಲ್ಲಿ ಲಾಲಾ ಲಜಪತ್ ರಾಯ್ ಅವರ ಸಾರಥ್ಯದಲ್ಲಿ ಸೈಮನ್ ಕಮಿಷನ್​ ವಿರುದ್ಧದ ಪ್ರತಿಭಟನೆ ವೇಳೆ ಲಾಠಿ ಚಾರ್ಜ್ ನಡೆಯಿತು. ಈ ವೇಳೆ ಲಾಲಾ ಲಜಪತ್ ರಾಯ್ ಅವರು ಕೊನೆ ಉಸಿರೆಳೆದಿದ್ದರು. ಇದರಿಂದ ಕೆರಳಿದ ಕ್ರಾಂತಿಕಾರಿಗಳಾದ ಭಗತ್​ಸಿಂಗ್, ಸುಖದೇವ್ ಹಾಗೂ ರಾಜ್​​​ಗುರು ಅವರು, ಬ್ರಿಟೀಷ್ ಪೊಲೀಸ್ ಮುಖ್ಯಸ್ಥ ಸ್ಕಾಟ್ ಹತ್ಯೆಗೆ ಲಾಹೋರ್​ನಲ್ಲಿ ಸಂಚು ರೂಪಿಸುತ್ತಾರೆ. ಆದರೆ ಇವರು ಡಿಎಸ್​ಪಿ ಜೆ.ಪಿ.ಸೌಂಡರ್ಸ್​​​ ಅವರ ಹತ್ಯೆ ಮಾಡುತ್ತಾರೆ.

ಈ ಹತ್ಯೆಯ ಬಳಿಕ ಭಗತ್​​ಸಿಂಗ್​ ಲಾಹೋರ್​ನಿಂದ ಪರಾರಿ ಆಗುತ್ತಾರೆ. ಈ ಪ್ರಕರಣದ ವಿಚಾರಣೆ ಲಾಹೋರ್​ನಲ್ಲಿಯೇ ನಡೆಯುತ್ತದೆ. ಈ ಪ್ರಕರಣ ಸಂಬಂಧದ ಕಡತಗಳು ಇನ್ನೂ ಲಾಹೋರ್​ನಲ್ಲಿಯೇ ಇವೆ.

ಸೂಕ್ಷ್ಮ ದಾಖಲೆ ಅನ್ನುತ್ತಿದೆ ಪಾಕಿಸ್ತಾನ

1928-31ರ ಲಾಹೋರ್​ ಸಂಚು ಪ್ರಕರಣ ಸಂಬಂಧದ ಕಡತವನ್ನು ಲಾಹೋರ್​​ ಸಂಗ್ರಹಾಗಾರದಲ್ಲಿ ಇರಿಸಲಾಗಿದೆ. ಭಾರತ ಸೇರಿದಂತೆ ವಿವಿಧೆಡೆಯ ಇತಿಹಾಸಕಾರರು ಇವುಗಳನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೆ ಲಾಹೋರ್​ ಆಡಳಿತ ಇದಕ್ಕೆ ಅವಕಾಶ ನೀಡಿಲ್ಲ.

ಭಗತ್​​ಸಿಂಗ್ ಕುರಿತು ಸಂಶೋಧನೆ ನಡೆಸಿರುವ ಲಂಡನ್ ಮೂಲದ ಕವಿ ಹಾಗೂ ಸಂಶೋಧಕ ಅಮರ್​​ಜಿತ್ ಚಂದನ್, ಅನೇಕ ಇತಿಹಾಸಕಾರರ ಈ ಕಡತಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಸಂಗ್ರಹಾಗಾರದಲ್ಲಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಕ್ಕೆ ಒಂದೆರಡು ಕಡತಗಳನ್ನು ತೋರಿಸಿದ್ದರು. ಆದರೆ ಅವುಗಳಲ್ಲಿನ ಮಾಹಿತಿ ತಿಳಿಯುವುದಕ್ಕೆ, ಫೋಟೊ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಲಾಹೋರ್ ಸಂಚು ಕುರಿತು ಕಡತಗಳು ಇಲ್ಲಿನ ಸಂಗ್ರಹಾಗಾರದಲ್ಲಿವೆ ಎಂಬುದು ಹೊರಜಗತ್ತಿಗೆ ತಿಳಿದದ್ದು ಡಿಸೆಂಬರ್ 2010ರಲ್ಲಿ. ಸಂಶೋಧಕ ಅಮರ್​ಜಿತ್ ಚಂದನ್ ಅವರು ಈ ಸಂಗ್ರಹಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕವಷ್ಟೇ ಇವುಗಳ ಮಾಹಿತಿ ತಿಳಿದು ಬಂದಿತ್ತು.

ಭಗತ್​​​ ಸಿಂಗ್ ಅವರ ಮೊಮ್ಮಗ, ಪ್ರೊ.ಜಗಮೋಹನ್ ಅವರು, ಲಾಹೋರ್​ ಸಂಚು ಕುರಿತು ಕಡತಗಳನ್ನು ಪಾಕಿಸ್ತಾನ ಸರ್ಕಾರ ಸೂಕ್ಷ್ಮ ದಾಖಲೆಗಳು ಎಂದು ಪರಿಗಣಿಸುತ್ತಿದೆ. ಆದ್ದರಿಂದ ಈ ಕಡತಗಳನ್ನು ಹೊರಜಗತ್ತಿಗೆ ತೋರಿಸುತ್ತಿಲ್ಲ ಎಂದು ತಿಳಿಸಿದರು.

ಭಾರತ ಸರ್ಕಾರ ಮಧ್ಯಪ್ರವೇಶ ಮಾಡಿ, ಈ ಕಡತಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡರೆ, ಕ್ರಾಂತಿಕಾರಿಗಳ ಕುರಿತು ಅನೇಕ ಮಾಹಿತಿಗಳು ಲಭ್ಯವಾಗಲಿದೆ.

fastmailkannada@gmail.com